ರವಿಶಂಕರ್
1926-ಪ್ರಪಂಚ ಖ್ಯಾತಿಯ ಸೀತಾರ್‍ವಾದಕ ಹಾಗೂ ಸಂಗೀತ ರಚನಾಕಾರ. 1920ರಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಜನಿಸಿದರು. ಇವರದು ಸುಸಂಸ್ಕøತ ಬಂಗಾಲಿ ಬ್ರಾಹ್ಮಣ ಕುಟುಂಬ. ತಂದೆ ಡಾಕ್ಟರ್ ಶ್ಯಾಮ್. ಅಣ್ಣ ಪ್ರಸಿದ್ಧ ನರ್ತಕ ಉದಯಶಂಕರ್, ರವಿಶಂಕರ್ 10 ವರ್ಷದವರಿದ್ದಾಗ, 1930ರಲ್ಲಿ ತನ್ನ ಅಣ್ಣನೊಂದಿಗೆ ಪ್ಯಾರಿಸ್‍ಗೆ ತೆರಳಿದರು. ಅಲ್ಲಿ ಇವರು 1933ರ ವೇಳೆಗೆ ಕೆಲವು ನಾಟ್ಯಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಅಭಿನಯಿಸಿದರು; ಜೊತೆಗೆ ನೃತ್ಯವನ್ನೂ ಅನೇಕ ವಾದ್ಯಗಳ ನುಡಿಸುವಿಕೆಯನ್ನೂ ಕಲಿತರು. 1938-44ರ ಅವಧಿಯಲ್ಲಿ ಉಸ್ತಾದ್ ಅಲ್ಲಾವುದ್ದೀನ್ ಖಾನ್‍ರ ಬಳಿ ಶಾಸ್ತ್ರೀಯವಾಗಿ ಸಿತಾರ್ ವಾದನವನ್ನು ಕಲಿತರು. 1945-46ರಲ್ಲಿ ಕಲ್ಕತ್ತೆಯ ಇಪ್ಟಾ (ಐ.ಪಿ.ಟಿ.ಎ.) ಸಂಸ್ಥೆಗೆ ಸೇರಿಕೊಂಡು ಹಲವಾರು ನಾಟ್ಯಗಳಿಗೆ ಸಂಗೀತ ರಚಿಸಿದರು. 1947ರಲ್ಲಿ ರೆನೈಸಾನ್ಸ್ ಕಲಾವಿದರನ್ನು ಹುಟ್ಟುಹಾಕಿದರು. 1945ರಲ್ಲಿ 'ಡಿಸ್ಕವರಿ ಆಫ್ ಇಂಡಿಯನ್ ಬ್ಯಾಲೆಯ ಪರಷ್ಕøತ ಪ್ರತಿಗಳಿಗೆ ಸ್ವತಂತ್ರ ಸಂಗೀತ ರಚನೆಗಳನ್ನು ರಚಿಸಿ ಸಂಗೀತ ನೀಡಿದರು. 1949ರಲ್ಲಿ ಆಕಾಶವಾಣಿಯ ವಾದ್ಯವೃಂದ ಸಮೂಹದ ಕಾರ್ಯಭಾರಿ ಆಗಿದ್ದರು. 1958ರಲ್ಲಿ ಪ್ಯಾರಿಸ್‍ನಲ್ಲಿ ನಡೆದ ಯುನೆಸ್ಕೊ ಮ್ಯೂಸಿಕ್ ಫೆüಸ್ಟಿವಲ್‍ನಲ್ಲಿ ಭಾಗವಹಿಸಿದ್ದರು. 1967ರಲ್ಲಿ ಲಾಸ್‍ಎಂಜಲೀಸ್‍ನಲ್ಲಿ ಕಿನ್ನರ ಸಂಗೀತ ಶಾಲೆಯನ್ನು ಪ್ರಾಂಭಿಸಿದ್ದರು. ಭಾರತದಲ್ಲಿಯೂ ಮುಂಬಯಿನಲ್ಲಿ ಈ ಶಾಲೆಯ ಶಾಖೆ ಇದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೊ ಆಗಿದ್ದರು. ಸತ್ಯಜಿತ್‍ರೇ ಅವರ ಪಥೇರ್ ಪಾಂಚಾಲಿ ಎಂಬ ಚಲನಚಿತ್ರಕ್ಕೆ ಸಂಗೀತವನ್ನು ರಚಿಸಿದರು. 1968ರಲ್ಲಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಿಂದ ಲಲಿತಕಲೆಗಳಲ್ಲಿ ಪಿಎಚ್.ಡಿ. ಪದವಿ ಪಡೆದರು. 1970ರಲ್ಲಿ ಕ್ಯಾಲಿಫೋರ್ನಿಯದ ಕಲಾಸಂಸ್ಥೆಯ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು. 1973ರಲ್ಲಿ ಕೈರಾಗರ್ ಸಂಗೀತ ವಿಶ್ವವಿದ್ಯಾಲಯ ಮತ್ತು ರವೀಂದ್ರ ಭಾರತಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟೊರೇಟ್ ಪದವಿಗಳನ್ನು ಪಡೆದರು. ವಿಶ್ವಭಾರತಿ ವಿಶ್ವವಿದ್ಯಾಲಯ ಇವರಿಗೆ ದೇಶಿಕೋತ್ತಮ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. ಇವರು ವಾರಾಣಸಿಯಲ್ಲಿ 1976ರಲ್ಲಿ ಸಂಗೀತ ಮತ್ತು ಪ್ರದರ್ಶನ ಕಲೆಗಳ ಸಂಶೋಧನ ಕೇಂದ್ರವನ್ನು ಸ್ಥಾಪಿಸಿದರು. ಕಲ್ಕತ್ತದ ಪ್ರದರ್ಶನ ಕಲೆಗಳ ರಾಷ್ಟ್ರೀಯ ಕೇಂದ್ರ ಹಾಗೂ ಸೃಜನಾತ್ಮಕ ಕಲೆಗಳ ಶಂಕರ್ ಫೌಂಡೇಶನ್‍ಗಳಿಗೆ ಗೌರವ ಸಲಹೆಗಾರರಾಗಿದ್ದರು. ವಾದ್ಯ ಸಂಗೀತ ಮಂಡಳಿಯ ಸದಸ್ಯರಾಗಿದ್ದರು. ಭಾರತ ಸರ್ಕಾರ ಇವರಿಗೆ 1967ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ನೊಬೆಲ್ ಪ್ರಶಸ್ತಿಗೆ ಸಮನಾದ ಪ್ರತಿಷ್ಠೆ ಹೊಂದಿರುವ, ಸಂಗೀತ ಕ್ಷೇತ್ರದ ಸಾಧನೆಗೆ ಸಲ್ಲುವ ಪುರಸ್ಕಾರವಾಗಿರುವ ಸ್ವೀಡಿಷ್ ಸಂಗೀತ ಅಕಾಡೆಮಿಯ ಪೋಲಾರ್ ಸಂಗೀತ ಪ್ರಶಸ್ತಿಯನ್ನು ಸ್ವೀಡಿಷ್ ದೊರೆ ಕಾರ್ಲ್‍ಗುಸ್ತಾಫ್‍ರಿಂದ ಪಡೆದಿದ್ದಾರೆ (1998). ಈ ಪ್ರಶಸ್ತಿಯ ಮೊತ್ತ 1.25.000 ಡಾಲರ್‍ಗಳು (ಒಂದು ಮಿಲಿಯನ್ ಕ್ರೋನರ್).

	ಜುಗಲ್‍ಬಂದಿ ಎಂಬ ಶಬ್ದಕ್ಕೆ ಜಗತ್ತಿನಾದ್ಯಂತ ಹೊಸ ಆಯಾಮ ಕೊಟ್ಟವರು ಪಂಡಿತ ರವಿಶಂಕರ್ ಮತ್ತು ಅಲಿ ಅಕ್ಬರ್‍ಖಾನ್. ಇವರ ಪ್ರಕಾರ ಜುಗಲ್‍ಬಂದಿ ಎಂದರೆ ಸಂಗೀತ ಸ್ಪರ್ಧೆ, ಸವಾಲ್ ಜವಾಬ್‍ಗಳ ಆಟ: ಅಷ್ಟೆ ಅಲ್ಲ ಪ್ರತಿ ಸಂಗೀತವಾದ್ಯಕ್ಕೆ ಇರುವ ವೈಶಿಷ್ಟ್ಯ. ಮಾಧುರ್ಯಗಳ ಹಾಗೂ ಭಾರತೀಯ ಸಂಸ್ಕøತಿ-ಪರಂಪರೆಗಳ ಸಮನ್ವಯ. ಇವರ ಅನೇಕ ಸಿತಾರ್ ಧ್ವನಿ ಸುರುಳಿಗಳನ್ನು ಪ್ರಸಿದ್ಧ ಎಚ್.ಎಂ.ವಿ. ಕ್ಯಾಸೆಟ್ ಸಂಸ್ಥೆ ಬಿಡುಗಡೆ ಮಾಡಿದೆ. 

	ರವಿಶಂಕರ್ ಅವರು ವಾದ್ಯವೃಂದದ ಸಂಯೋಜನೆಯಲ್ಲೂ ವಿಶಿಷ್ಟತೆಯನ್ನು ಮೆರೆದಿದ್ದಾರೆ. ಇವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಗಳನ್ನು ಒಗ್ಗೂಡಿಸಲು ಯತ್ನಿಸದರು. ಬೀಟಲ್ಸ್ ವಾದ್ಯ, ಪಾಪ್ ಸಂಗೀತ, ಜಾಜ್ ಮೊದಲಾದ ಸಂಗೀತದ ವಿಧಿವಿಧಾನಗಳ ತಿಳಿವಳಿಕೆ ಇವರಲ್ಲಿದೆ. ಇವರ ಈ ಎಲ್ಲ ಪ್ರಯತ್ನಗಳ ಅಂತಃಶಕ್ತಿ ಎಂದರೆ ಎಲ್ಲಾ ಬಗೆಯ ತಾಳವಾದ್ಯಗಳನ್ನೂ ಒಂದೇ ವೇದಿಕೆಯಲ್ಲಿ ಪ್ರಸ್ತುತಪಡಿಸುವುದು. ಈ ಬಗೆಯ ಯತ್ನಗಳು ಇತ್ತೀಚೆಗೆ ಹೆಚ್ಚಲು ಮುಖ್ಯ ಪ್ರೇರಕ ಶಕ್ತಿ ರವಿಶಂಕರ್ ಅವರೇ ಎನ್ನಬಹುದು.

	ಪ್ರಪಂಚ ಪ್ರಸಿದ್ಧ ಸರೋದ್ ವಾದಕರಾದ ಉಸ್ತಾದ್ ಅಲಿ ಅಕ್ಬರ್‍ಖಾನ್‍ರವರ ತಂಗಿ ಅನ್ನಪೂರ್ಣಾದೇವಿ ರವಿಶಂಕರರ ಮೊದಲ ಪತ್ನಿ.

	ಮ್ಯೂಸಿಕ್ ಮೆಮೊರಿ, ಮೈ ಮ್ಯೂಸಿಕ್ ಮೈ ಲೈಫ್, ರಾಗ್ ಅನುರಾಗ್ (ಬಂಗಾಲಿ ಭಾಷೆಯಲ್ಲಿದೆ)-ಇವು ಇವರ ಕೆಲವು ಪ್ರಕಟಿತ ಕೃತಿಗಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ